ರಾಯಘಟ
ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲೆ. ಹಾಗೂ ಐತಿಹಾಸಿಕ ಪ್ರೇಕ್ಷಣಿಯ ಸ್ಥಳ. ಜಿಲ್ಲೆಯ ವಿಸ್ತೀರ್ಣ 7148 ಚಕಮೀ. ಜನಸಂಖ್ಯೆ : 18,18,130 (1991). ಆಲಿಬಾಗ್ ಈ ಜಿಲ್ಲೆಯ ಆಡಳಿತ ಕೇಂದ್ರ ಪಟ್ಟಣ. ಈ ಜಿಲ್ಲೆಯ ಪ್ರಸಿದ್ಧಿಗೆ ಮತ್ತು ಹೆಸರಿಗೆ ಇಲ್ಲಿರುವ ರಾಯಘಡ ಕೋಟೆ ಕಾರಣ. ಪುಣೆ ನಗರಕ್ಕೆ ಆಗ್ನೇಯದಲ್ಲಿ ಸು. 52ಕಿಮೀ ದೂರದಲ್ಲಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಬಲವಾದ ಒಂದು ಕೋಟೆ ಇದೆ. ಪರ್ವತ ಪ್ರದೇಶದ ರಕ್ಷಿತಸ್ಥಳದಲ್ಲಿರುವ ಈ ಕೋಟೆಯ ಸುತ್ತ ಇರುವ ಬೆಟ್ಟ ಬಹಳ ಕಡಿದಾದ ಶತ್ರುಗಳು ಭೇದಿಸಲಾಗದಂತಿದೆ. ಈ ಬೆಟ್ಟದ ಮೇಲ್ಭಾಗ ಪೂರ್ವ ಪಶ್ಚಿಮವಾಗಿ 1.6 ಕಿಮೀ. ದಕ್ಷಿಣೊತ್ತರವಾಗಿ 2.6 ಕಿಮೀ. ವಿಸ್ತಾರವಿದೆ. ಇದು ಸಮುದ್ರ ಮಟ್ಟಕ್ಕೆ ಸು. 868 ಮೀ ಎತ್ತರದಲ್ಲಿದೆ.  ಈಶಾನ್ಯ ಭಾಗದಲ್ಲಿ ಮಾತ್ರ ಗಾರೆಗಚ್ಚು ಹಾಕಿ ಕೋಣೆಯನ್ನು ಭದ್ರಪಡಿಸಲಾಗಿದೆ.  ಈ ಕೋಟೆಗೆ ಪಶ್ಚಿಮ ಮತ್ತು ದಕ್ಷಿಣಭಾಗಗಳಲ್ಲಿ ಹೆಬ್ಬಾಗಿಲುಗಳಿವೆ.

ರಾಯಘಡವನ್ನು ಮೊದಲು ಯುರೋಪಿಯನ್ನರು ರಾಯರಿ ಎಂದು ಕರೆಯುತ್ತಿದ್ದರು. ಈ ಪ್ರದೇಶ ಪೂರ್ವದ ಜಿಬ್ರಾಲ್ಟರ್ ಎಂದೂ ಹೆಸರಾಗಿತ್ತು. ಇದು ಹಳೆ ಬೊಂಬಾಯಿ ಪ್ರಾಂತ್ಯದ ಕೊಲಾಬ ಜಿಲ್ಲೆಯ ಮಹಾಡ್ ತಾಲ್ಲೂಕಿಗೆ ಸೇರಿತ್ತು. ಹನ್ನೆರಡನೆಯ ಶತಮಾನದಲ್ಲಿ ರಾಯರಿ ಮರಾಠ ಪಾಳೆಯಗಾರರ ರಾಜಧಾನಿಯಾಗಿತ್ತು. ಆ ಪಾಳೆಯಗಾರರನ್ನು ವಿಜಯನಗರದ ಸಾಮಂತರಾಗಿದ್ದರು. ಹದಿನೈದನೆಯ ಶತಮಾನದ ಹೊತ್ತಿಗೆ ಎರಡನೆಯ ಅಲ್ಲಾವುದ್ದೀನ್ ಷಾ ಬಹುಮನಿಯು ರಾಯರಿ ಪಾಳೆಯಗಾರರನ್ನು ಸೋಲಿಸಿ ತನಗೆ ಅಧೀನವಾಗುವಂತೆ ಬಲಪಡಿಸಿದ.  ಕ್ರಮೇಣ ಬಿಜಾಪುರದ ಆದಿಲ್‍ಷಾಹಿಗಳು ಮೊಗಲರ ಉತ್ತೇಜನದಿಂದ ರಾಯಘಡಕ್ಕೆ ಅಧಿಕಾರಿಗಳಾಗಿ ಅದನ್ನು ಇಸ್ಲಾಮ್‍ಘಡ್ ಎಂದು ಕರೆದರು. ಮುಂದೆ ಜಂಜೀರ್ ಎಂಬವನ ವಶಕ್ಕೆ ಬಂದು ಅಲ್ಲಿ ಮರಾಠಸೇನೆ ಬೀಡು ಬಿಡುವ ನೆಲೆಯಾಯಿತು. 1646ರಲ್ಲಿ ಶಿವಾಜಿ ಇದನ್ನು ವಶಪಡಿಸಿಕೊಂಡ. ಗೆರಿಲ್ಲಾಯುದ್ದದಲ್ಲಿ ಚಾಣಾಕ್ಷನೂ ಶೂರನೂ ಆದ ಶಿವಾಜಿ ರಾಯಘಡದ ಸನ್ನಿವೇಶಕ್ಕೆ  ಮಾರುಹೋಗಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಅಂದಿನಿಂದರಾಯರಿ ರಾಯಘಡ ಆಯಿತು. ರಾಯಘಡದಲ್ಲಿ ಅನೇಕ ಕಲ್ಲಿನ ಕಟ್ಟಡಗಳು ಮನೆಗಳು ಅರಮನೆಗಳು ನಿರ್ಮಿತವಾದವು. ಸೇನಾಶಿಬಿರಕ್ಕೆ ಬೇಕಾದ ಸಕಲವನ್ನೂ ಅಲ್ಲಿ ಸಜ್ಜುಗೊಳಿಸಲಾಯಿತು.  ಮದ್ದುಗುಂಡುಗಳನ್ನಿಡಲು ಪ್ರತ್ಯೇಕ ಕಟ್ಟಡಗಳು ನಿರ್ಮಿತವಾದವು. ಕೋಟೆಯನ್ನು ದುರಸ್ತುಮಾಡಿ ಭದ್ರಪಡಿಸುದುದಲ್ಲದೆ ಟಂಕಶಾಲೆಯೊಂದನ್ನು ಕಟ್ಟಲಾಯಿತು. 1674ರಲ್ಲಿ ಷಹಾಜಿಯ ಮರಣಾನಂತರ ಶಿವಾಜಿ ರಾಯಘಡದಲ್ಲಿ ವೈಭವದಿಂದ ಪಟ್ಟಾಭಿಷಿಕ್ತನಾಗಿ ಛತ್ರಪತಿ ಬಿರುದನ್ನು ಧರಿಸಿದ. ಶಿವಾಜಿಯ ಮರಣಾನಂತರ 1690ರ ವೇಳೆಗೆ ಔರಂಗ್‍ಜೇಬ್ ಈ ಕೋಟೆಯನ್ನು ವಶಪಡಿಸಿಕೊಂಡ. ಅನಂತರ ಮತ್ತೆ ಮರಾಠರಿಗೆ ಸೇರಿ ಅಂತಿಮವಾಗಿ ಬ್ರಿಟಿಷರ ಕೈಸೇರಿತು. 1815ರಲ್ಲಿ ಬ್ರಿಟಿಷರು ಹೋರಾಟ ನಡೆಸಿ ಈ ಕೋಟೆಯನ್ನು ವಶಪಡಿಸಿಕೊಂಡಾಗ ಅಲ್ಲಿ ಐದು ಲಕ್ಷ ನಾಣ್ಯಗಳು ದೊರಕಿದವೆನ್ನುವರು.		 							
 (ಜೆ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ